Vijayothsava – Vijayadashami – Importance of Banni – Kannada Version

King Raghu

Story of King Raghu (of Raghuvamsha) written by my mother in Kannada script.  This story appears in the Ramayana and my mother has written in simple words for easy understanding. Click here for the English version.

ವಿಜಯೋತ್ಸವ

ರಘು ಚಕ್ರವರ್ತಿ ಮಹಾ ಪರಾಕ್ರಮ ಶಾಲಿ. ಗುಣಯುತ, ಧರ್ಮಾತ್ಮ, ನಿಷ್ಕಾಮ ಒಂದನೇಯನಾದಂಢ ಮಹಾರಾಜ. ಗುರು ವಶಿಷ್ಠರ ಆಜ್ಞೆಯಂತೆ ‘ವಿಶ್ವಜಿತ್’ ಯಜ್ಞವನ್ನು ಮಾಡುತ್ತಾನೆ. ದಿಕ್ಕು ದಿಕ್ಕುಗಳಲ್ಲಿ ಅರಸರುಗಳನ್ನು ಗೆದ್ದು ಅಪರಂಪಾರವಾದ ದೃವ್ಯವನ್ನು ಕಪ್ಪು ಕಾಣಿಕೆಯ ರೂಪದಲ್ಲಿ ತರುತ್ತಾನೆ. ಯಜ್ಞವನ್ನು ಮಾಡಿ ಬೇಡಿದವರಿಗೆ ಬೇಡಿದುದನ್ನು ಕೊಟ್ಟು ಕೊಟ್ಟು ಭಂಡಾರದಲ್ಲಿದ್ದ ದೃವ್ಯವೆಲ್ಲ ಮುಗಿದು ಹೋಗುತ್ತದೆ.

ಆಗ ವರತಂತು ಎಂಬ ಋಷಿಯ ಶಿಷ್ಯನಾದ ಕೌತ್ಸನು ಅಯೋಧ್ಯಯ ಅರಮನೆಗೆ ಬರುತ್ತಾನೆ. ಬಂದ ಮಹಾಶಯನನ್ನು ರಘು ರಾಜನು ಆದರದಿಂದ ಸ್ವಾಗತಿಸಿ, ಉಚಿತವಾದ ಸನ್ಮಾನದಿಂದ ಪಾದ ಪೂಜೆ ಮಾಡಿ ಕರೆತರುತ್ತಾನೆ. ಪಾದ ತೊಳೆಯಲು ಮಣ್ಣಿನ ಪಾತ್ರೆಯಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು ಪಾದ ತೊಳೆಯುತ್ತಾನೆ. ಆಗ ಕೌತ್ಸನು ಓ ಹೋ ನಾನು ಸರಿಯಾದ ಸಮಯಕ್ಕೆ ಬರಲಿಲ್ಲ ಯಾವ ರಾಜನು ಚಿನ್ನದ ಕಲಶದಿಂದ ಪೂಜೆಮಾಡುತ್ತಿದ್ದನೋ ಅಂತಹ ರಾಜನು ಮಣ್ಣಿನ ಕಲಶದಿಂದ ಪಾದವನ್ನು ತೊಳೆದನು. ಇನ್ನು ನಾನು ಬೇಡುವುದು ಸರಿಯಲ್ಲವೆಂದು ನಿಶ್ಚಯಿಸಿ ಹೊರಡಲು ಅನುವಾಗುತಾನೆ. ಆಗ ರಘುರಾಜನು ಅವನಿಗೆ, ತಾವು ಬಂದ ಕಾರಣವೇನು? ನಿಮ್ಮ ಗುರುಗಳು ಕ್ಷೇಮವೇ? ನಿಮ್ಮ ವಿದ್ಯಾಭ್ಯಾಸವು ಮುಗಿದು ನೀವು ಗ್ರಿಹಸ್ಥರಾಗಲು ಗುರುಗಳು ಹೇಳಿದರೆ? ನಿಮ್ಮ ಇಚ್ಛೆಯನ್ನು ತಿಳಿಸದೆ ಹೋಗುವುದು ಉಚಿತವಲ್ಲ ಎಂದು ಹೇಳುತ್ತಾನೆ.

ಆಗ ಕೌತ್ಸನು ನಿನ್ನಂಥ ರಾಜನು ಇರಲಿಕ್ಕಾಗಿ ನಮಗೆ ಯಾತರ ಭಯ ಇಲ್ಲ. ನಮ್ಮ ಗುರುಗಳಾದ ವರತಂತು ಮಹರ್ಷಿಗಳು ಕ್ಷೇಮ ವಾಗಿದ್ದರೆ. ನನ್ನ ವಿದ್ಯೆ ಮುಗಿದ ಮೇಲೆ ನಾನು ಗುರುದಕ್ಷಿಣೆಯನ್ನು ಏನು ಕೊಡಲಿ ಎಂದು ಗುರುಗಳಲ್ಲಿ ಸವಿನಯದಿಂದ ಕೇಳಿದೆ. ಆಗ ನಮ್ಮ ಗುರುಗಳು, ನೀನು ಇಷ್ಟು ದಿನ ನನ್ನ ಸೇವೆಯನ್ನು ಮಾಡಿದ್ದೀಯೆ ಅದೇ ನನಗೆ ಸಾಕು ಯೆಂದು ಹೇಳಿದರು. ಆದರೂ ನಾನು ನೀವು ಹೇಳಲೇಬೇಕೆಂದು ಒತ್ತಾಯಿಸಿದೆ. ಆಗ ಗುರುಗಳು ರೇಗಿ ಹಾಗಾದರೆ ಹೋಗಿ ಹದಿನಾಲ್ಕು ಕೋಟಿ ವರಹ ತೆಗೆದುಕೊಂಡು ಬಾ ಎಂದರು. ನನ್ನ ಬಡತನವನ್ನು ಕಂಡು ಗುರುಗಳು ಕೇಳಿದ್ದನ್ನು ಕೇಳಿ ನಾನು ದಂಗಾಗಿ ಹೋದೆ. ಆದರೂ ದ್ರವ್ಯವು ವಿದ್ಯಾಗಿಂತ ದೊಡ್ಡದಲ್ಲ ಎಂದು ತಿಳಿದು, ನಾನು ನಿನ್ನ ಯಾಗ ನೀನು ಮಾಡುವ ದಾನವನ್ನು ಕೇಳಿ, ನಿನ್ನನ್ನು ಬೇಡಿದರೆ ನನಗೆ ಗುರು ದಕ್ಷಿಣೆ ಕೊಡುವ ದೃವ್ಯಸಿಗುವದೆಂದು ಬಂದೆ. ಆದರೆ ನಿನ್ನ ಕೈಯಲ್ಲಿರುವ ಮಣ್ಣಿನ ಕೊಡದಿಂದ ನೀನು ದೃವ್ಯಹೀನನಾಗಿದ್ದೀಯೇ ಎಂದು ತಿಳಿದೇ, ನಾನಿನ್ನು ಬರುತ್ತೇನೆ, ಎನ್ನಲು ರಘುರಾಜನು “ಮುನಿವರ್ಯರೇ ನನ್ನಲ್ಲಿ ಬಂದು ಹಾಗೆ ಹೋಗಲು ನಾನು ಬಿಡುವದಿಲ್ಲ, ನೀವು ವಂದೆರಡು ದಿನ ನಮ್ಮ ಯಾಗ ಶಾಲೆಯಲ್ಲಿ ವಿಶ್ರಮಿಸಿರಿ ನಿಮ್ಮ ಇಚ್ಛೆಯನ್ನು ಪೂರೈಸುತೇನೆ”, ಎಂದು ಹೇಳುತ್ತಾನೆ. ಅವರು ಆಗಲೆಂದು ಒಡಂಬಟ್ಟು ಯಾಗಶಾಲೆಗೆ ತೆರಳುತ್ತಾರೆ.

ರಘುರಾಜನು ಎಂಟುದಿಕ್ಕಿನಲ್ಲಿರುವ ಅರಸುಗಳನ್ನು ಸೋಲಿಸಿರುತ್ತಾನೆ, ಗುರು ವಶಿಷ್ಠರ ಮಂತ್ರದಿಂದ ಅವನಿಗೆ ಸ್ವರ್ಗ ಹಾಗೂ ಪಾತಾಳದಲ್ಲಿಯೂ ಹೋಗಿ ಯುಧ್ದಮಾಡಲು ಬರುತ್ತಿರುತ್ತದೆ. ಕ್ಷತ್ರಿಯರಿಗೆ ಬೇಡುವದು ಧರ್ಮವಲ್ಲ. ಕಾರಣ ಐಶ್ವರ್ಯಕ್ಕೆ ಒಡೆಯನಾದ ಕುಬೇರನೊಂದಿಗೆ ಯುಧ್ದಮಾಡಿ ಧನವನ್ನು ತರಬೇಕೆಂದು ನಿರ್ಧರಿಸುತ್ತಾನೆ.

ಮಾರನೆಯ ದಿನ ಬೆಳಗಿನಲ್ಲಿ ಆಯುಧಗಳಿಂದ ತುಂಬಿದ ರಥದಲ್ಲಿ ಕುಳಿತು ಹೋರಾಡಬೇಕು ಎನ್ನುವಷ್ಟರಲ್ಲಿ, ಕೋಶಾಧಿಪತಿಯು ಬಂದು ಮಹಾರಾಜನೆ ನಿಮ್ಮ ಭಂಡಾರದಲ್ಲಿ ಹೊನ್ನಿನ ಮಳೆಯಾಗಿದೆ ಎಂದು ಅರಹುತ್ತಾನೆ. ಕುಬೇರನು ಇವನ ಶೌರ್ಯಕ್ಕೆ ಹೆದರಿ ಹೊನ್ನಿನ ಮಳೆ ಗರೆದು ಬಿಡುತ್ತಾನೆ. ಅಂದು ವಿಜಯದಶಮಿ ದಿನವಾಗಿತ್ತು.

ಆಗ ಕೌತ್ಸನನ್ನು ಕರೆದು, ತನಗೆ ಸಿಕ್ಕಿರುವ ಎಲ್ಲ ದೃವ್ಯವನ್ನೂ ತೆಗೆದುಕೊಂಡು ಹೋಗಬೇಕೆಂದು ವಿನಂತಿಸಿಕೊಳ್ಳುತ್ತಾನೆ, ಆಗ ಕೌತ್ಸನು ನನಗೆ ಗುರು ದಕ್ಷಿಣೆಗೆ ಬೇಕಾದಷ್ಟನ್ನೇ ನಾನು ತೆಗೆದು ಕೊಳ್ಳುವೆನು, ನಿನ್ನ ಔಧಾರ್ಯ ಶೌರ್ಯಕ್ಕೆ ನಾನು ತುಂಬಾ ಮೆಚ್ಚಿದೆನು ನಿನಗೆ ನಿನ್ನಂತಹ ಬಲಶಾಲಿಯೂ ಧರ್ಮನಿಷ್ಠನಾದ ಮಗನಾಗಲೆಂದು ಹರಿಸಿ ಬೀಳ್ಕೊಡುತ್ತಾನೆ. ರಘುವಿ ನ ಮಗ “ಅಜ”, ಅಜನ ಮಗ “ದಶರಥ”, ದಶರಥನ ಮಗ “ಶ್ರೀರಾಮ”.

ಕೌತ್ಸನು ವರತಂತು ಋಷಿಗೆ ತಂದ ಗುರುದಕ್ಷಿಣೆ ಕೊಟ್ಟಾಗ, ಅವರಿಗೆ ಬೇಡವೆಂದು ಹೇಳಿದರು. ಆಗ ಕೌತ್ಸನು, ಆ ಧನವನ್ನು ಅಲ್ಲಿಯ ಸಾಮಾನ್ಯ ಜನರಿಗೆ ಹಂಚಿದನು.

ಇದು ವಿಜಯೋತ್ಸವ ವಿಜಯ ದಶಮಿಯೆಂದು ಆಚರಿಸಲಾಗುತ್ತದೆ.  ಈ ಘಟನೆಯನ್ನು ಸ್ಮರಿಸಿಕೊಳ್ಳಲು ವಿಜಯದಶಮಿಯ (ದಸರಾ) ದಿನ ಬನ್ನಿ ಎಲೆಯನ್ನು “ಬನ್ನಿ ಬಂಗಾರ” ಎಂದು ಎಲ್ಲರಿಗೂ ಕೊಟ್ಟು ಶುಭ ಹಾರೈಸುತ್ತಾರೆ.

Related Images:

Related Post